ಪಂಚಸೋಪಾನ ಬೋಧನಕ್ರಮ -
	ಜರ್ಮನಿಯ ತತ್ತ್ವಶಾಸ್ತ್ರದ ಪ್ರಾಧ್ಯಾಪಕ ಯೋಹಾನ್ ಫ್ರಿಡ್ರಿಖ್‍ಹರ್ಬಾರ್ಟ್ ಕಳೆದ ಶತಮಾನದಲ್ಲಿ ಬೋಧನೆಗೂ ಕಲಿವಿಗೂ ನೆರವಾಗುವಂತೆ ರೂಪಿಸಿದ ಒಂದು ಶಾಸ್ತ್ರೀಯ ಬೋಧನಕ್ರಮ, ಅಂತಿಮ ಸ್ವರೂಪದಲ್ಲಿ ಅದು ಐದು ಹಂತಗಳನ್ನು ಒಳಗೊಂಡು ಪ್ರಚಾರಕ್ಕೆ ಬಂದದ್ದರಿಂದ ಇದನ್ನು ಪಂಚಸೋಪಾನ ಬೋಧನಕ್ರಮ (ಫೈವ್ ಫಾರ್ಮಲ್ ಸ್ಟೆಪ್ಸ್ ಆಫ್ ಟೀಚಿಂಗ್) ಎಂದು ಕರೆಯುವುದು ವಾಡಿಕೆಯಲ್ಲಿದೆ.

	ಯೂರೋಪಿನ ಸಮಕಾಲೀನ ಜ್ಞಾನರಾಜ್ಯದಲ್ಲಿ ಪ್ರಧಾನ ವ್ಯಕ್ತಿಯೆನಿಸಿದ್ದ ಹರ್ಬಾರ್ಟ್ ತತ್ವಶಾಸ್ತ್ರ, ಮನಶ್ಯಾಸ್ತ್ರ ಮತ್ತು ಶಿಕ್ಷಣಶಾಸ್ತ್ರಗಳಲ್ಲಿ ಆಳವಾದ ವ್ಯಾಸಂಗಮಾಡಿ ಸಂಶೋಧನೆಗಳನ್ನೂ ನಡೆಸಿದ್ದ ಅವನು ಅಂದಿನ ಶಿಕ್ಷಣದ ಸ್ವರೂಪವನ್ನು ಪರಿಶೀಲಿಸಿ ಅದರ ಉದ್ದೇಶ, ಬೋಧನ ವಸ್ತು ಮತ್ತು ಬೋಧನವಿಧಾನ- ಇವೆಲ್ಲ ಸಮಕಾಲೀನ ಜೀವನಕ್ಕೆ ಹೊಂದದವೆಂದು ತಿಳಿದು ಶಿಕ್ಷಣದ ಸುಧಾರಣೆಗೆ ತನ್ನವೇ ಆದ ಸಲಹೆಗಳನ್ನು ರೂಪಿಸಿದ. ಶಿಕ್ಷಣಶಾಸ್ತ್ರವನ್ನು ಕುರಿತ ಅವನ ಸಿದ್ಧಾಂತ ಆಧ್ಯಾತ್ಮಿಕ, ನೈತಿಕ ಹಾಗೂ ಮನಶ್ಯಾಸ್ತ್ರಗಳ ಹಾಸುಹೊಕ್ಕು ಬೆಳೆದಿದ್ದರೂ ಅವನು ಶಿಕ್ಷಣ ಒಂದು ವಿಜ್ಞಾನವೆಂಬ ಅಂಶದ ಬಗ್ಗೆ ದೃಢವಾದ ನಂಬಿಕೆಯನ್ನು ತಳೆದಿದ್ದ. ಆದ್ದರಿಂದ ಅದರ ಅನುಷ್ಠಾನದಲ್ಲಿ ವಿಧಾನಗಳ ಅನುಕರಣೆ ಅಗತ್ಯವೆಂದು ಭಾವಿಸಿದ್ದ. ಇನ್ನೂ ವಿದ್ಯಾರ್ಥಿಯಾಗಿದ್ದಾಗಲೆ ಒಬ್ಬ ಗವರ್ನರ್ ಕುಟುಂಬದ ಮಕ್ಕಳಿಗೆ ಪಾಠ ಹೇಳುತ್ತಿದ್ದ. ಅಂದಿಗಾಗಲೇ ಖ್ಯಾತಿಗೆ ಬಂದಿದ್ದು ಸ್ವಿಟ್ಸರ್ಲೆಂಡಿನಲ್ಲಿ ಏರ್ಪಟ್ಟಿದ್ದ ಪೆಸ್ಟಲಾಜಿ ಶಾಲೆಗೂ ಹೋಗಿ ನೋಡಿಕೊಂಡು ಬಂದಿದ್ದ. ಅಂದು ಯೂರೋಪಿನ ಶಿಕ್ಷಣರಂಗದಲ್ಲಿ ಖ್ಯಾತಿಗೆ ಬಂದಿದ್ದ ಪ್ರೋಬೆಲ್, ರೋಸೋ ಮುಂತಾದವರ ತತ್ತ್ವದೃಷ್ಟಿಯನ್ನೂ ಅರಿತಿದ್ದ.

	ಸಮಕಾಲೀನ ಸಮಾಜಜೀವನಕ್ಕೆ ಹೊಂದಿಕೊಂಡು ಸರಿಯಾಗಿ ಬಾಳುವಂತೆ ವ್ಯಕ್ತಿಯನ್ನು ಬೆಳೆಸುವುದೇ ಶಿಕ್ಷಣ ಉದ್ದೇಶವಾಗಬೇಕು; ಬರೀ ಜ್ಞಾನವೊಂದರಿಂದ ಇದು ಸಾಧ್ಯವಿಲ್ಲ; ವೈಯಕ್ತಿಕ ಗುಣಶೀಲಗಳೂ ಸಾಮಾಜಿಕ ನೀತಿನಿಷ್ಠೆಗಳೂ ಅವನಲ್ಲಿ ಬೆಳೆಯಬೇಕು; ಆದ್ದರಿಂದ ಶಿಕ್ಷಣದ ಉದ್ದೇಶ ಸತ್ಯ. ಚೈತನ್ಯಪೂರ್ಣ ನೀತಿ, ಸತ್ಯ ಸೌಂದರ್ಯಾದಿ ಜೀವನದ ಉನ್ನತಮೌಲ್ಯಗಳ ಬೆಳೆವಣಿಗೆಯನ್ನೂ ಒಳಗೊಂಡಿರಬೇಕು; ಪಠ್ಯವಸ್ತು ವಿದ್ಯಾರ್ಥಿಗೆ ಜ್ಞಾನ ಮತ್ತು ಜಗತ್ತಿನ ವಿಶಾಲ ಪರಿಚಯ ಮಾಡಿಕೊಡುವಂತಿರಬೇಕು; ಮಾನವಕುಲ ತನ್ನ ಸಂಸ್ಕøತಿಯನ್ನು ಬೆಳೆಸಿಕೊಂಡು ಮಾರ್ಗದಲ್ಲೇ ವ್ಯಕ್ತಿಜೀವನ ವಿಕಸಿಸಿ ಮಕ್ಕಳ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಆಯಾ ಅಂತಸ್ತಿಗೆ ಅನುಗುಣವಾಗುವಂಥ ಪಠ್ಯವಸ್ತುವನ್ನು ಗೊತ್ತುಮಾಡುವಾಗ ಮಾನವಕುಲದ ಬೆಳೆವಣಿಗೆಯ ಅಂತಸ್ತುಗಳ ಸ್ವರೂಪವನ್ನು ಗಮನದಲ್ಲಿರಿಸಿಕೊಂಡು ಪಠ್ಯವಸ್ತುವನ್ನು ರಚಿಸಬೇಕು(ಸಂಸ್ಕøತಿ ಘಟ್ಟಗಳ ಸಿದ್ಧಾಂತ); ಆದ್ದರಿಂದ ಪಠ್ಯ ವಸ್ತು ಇತಿಹಾಸ, ಭಾಷೆ, ಸಾಹಿತ್ಯ, ಗಣಿತ ಮತ್ತು ನಿಸರ್ಗವಿಜ್ಞಾನಗಳನ್ನು ಒಳಗೊಂಡಿದ್ದು ಅವೆಲ್ಲ ಒಂದಕ್ಕೊಂದಕ್ಕೆ ಸಂಬಂಧಿಸಿದಂತೆ ಬೋಧನೆಯಾಗಬೇಕು; ಅಂದು ಮಕ್ಕಳು ಪರಿಪೂರ್ಣವೂ ಸಂಬಂಧಿಸಿದ್ದೂ ಆದ ಅನುಭವ ಸಾಧಿಸಿ ಆ ಮೂಲಕ ತಮ್ಮ ಗುಣಶೀಲಗಳನ್ನು ಬೆಳೆಸಿಕೊಳ್ಳಬಲ್ಲರು; ಈ ಕಾರ್ಯಸಾಧನೆಯಾಗುವಂತೆ ಬೋಧನಕ್ರಮ ರೂಪುಗೊಳ್ಳಬೇಕು. ಇದು ಹರ್ಬಾರ್ಟ್‍ನ ಸಿದ್ಧಾಂತದ ತಿರುಳು. ಅವನು ರೂಪಿಸಿದ ಬೋಧನಕ್ರಮಕ್ಕೆ ಅನುಭವಸಾಧನೆ ಪೂರ್ಣವಾಗುವಂತೆ ಹಂತದಿಂದ ಹಂತಕ್ಕೆ ಮುಂದುವರಿಯಬೇಕೆಂಬುದು ಆಧಾರವಾಯಿತು. ಮನಸ್ಸು ಹೊಸ ಜ್ಞಾನ ಅಥವಾ ಅನುಭವವನ್ನು ಸ್ವೀಕರಿಸುವುದು ಅದು ಆಗಲೆ ಸಾಧಿಸಿರುವ ಸಂಬಂಧಪಟ್ಟ ಹಳೆಯ ಅನುಭವದೊಡನೆ ಸೇರಿಕೊಂಡಾಗ ಎಂಬುದು ಹರ್ಬಾರ್ಟ್‍ನ ನಂಬಿಕೆ (ಅನುಬೋಧಾ ನಿಧಿಯತತ್ತ್ವ-ಆಸರ್‍ಸೆಪ್ಟನ್ ಮಾಸ್) ಆದ್ದರಿಂದ ಹೊಸ ಅನುಭವವನ್ನು ದೊರಕಿಸುವ ಮುನ್ನ ಮಕ್ಕಳ ಮನಸ್ಸಿನಲ್ಲಿ ಹಿಂದಿನ ಅನುಭವವನ್ನು ಪ್ರಚೋದಿಸುವುದು ಬೋಧನಕ್ರಮದ ಪ್ರಥಮ ಹಂತವಾಗಬೇಕೆಂದು ತನ್ನ ಬೋಧನಕ್ರಮದಲ್ಲಿ ಅದನ್ನು ಸೇರಿಸಿಕೊಂಡ.

	ಹರ್ಬಾರ್ಟ್ ತಾನು ರೂಪಿಸಿದ ಬೋಧನಕ್ರಮಕ್ಕೆ ಮೊದಲು ಪೂರ್ವಸಿದ್ಧತೆ, ನಿರೂಪಣೆ ಅಥವಾ ವಿವರಣೆ, ಹೋಲಿಕೆ, ಸಾರ್ವತ್ರೀಕರಣ ನಿಯಮ ನಿರೂಪಣೆ ಮತ್ತು ಅನ್ವಯ (ಪ್ರಿಪರೇಷನ್, ಪ್ರೆಸಂಟೇಷನ್, ಕಂಪ್ಯಾರಿಷನ್, ಜನರಲೈಸೇಷನ್ ಅಂಡ್ ಅಪ್ಲಿಕೇಷನ್) ಎಂಬ ಐದು ಸೋಪಾನಗಳನ್ನು ಅಳವಡಿಸಿದ. ಅವನ ಅನಂತರ ಅವನ ಅನುಯಾಯಿಗಳು ಮೊದಲ ಸೋಪಾನವನ್ನು ಪೀಠಿಕೆ ಮತ್ತು ಸಮಸ್ಯೆಯ ಗುರಿ ನಿರೂಪಣೆ ಎಂದು ಎರಡು ಉಪವಿಭಾಗಗಳನ್ನಾಗಿ ವಿಂಗಡಿಸಿದರು. ಹರ್ಬಾರ್ಟನ ಈ ಬೋಧನ ಕ್ರಮದ ಯುಕ್ತತೆಯ ಬಗ್ಗೆ ವಿಚಾರಮಾಡುವ ಮುನ್ನ ಆ ಸೋಪಾನಗಳನ್ನು ಸ್ಥೂಲವಾಗಿ ಪರಿಚಯ ಮಾಡಿಕೊಳ್ಳುವುದು ಅಗತ್ಯ.

	1.ಪೂರ್ವ ಸಿದ್ಧತೆ : ಬೋಧಿಸಬೇಕಾದ ಹೊಸಪಾಠಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳ ಪೂರ್ವಜ್ಞಾನವನ್ನು ಪ್ರಚೋದಿಸಿ ಹೊಸ ಜ್ಞಾನವನ್ನು ಸ್ವೀಕರಿಸಿ ಸಿದ್ಧಪಡಿಸುವ ಹಾಗೂ ಆ ದಿನದ ಗುರಿಯನ್ನು ವಿದ್ಯಾರ್ಥಿಗಳ ಮುಂದಿಡುವ ಕಾರ್ಯ ಈ ಹಂತದಲ್ಲಿ ನಡೆಯುತ್ತದೆ. ಪ್ರಶ್ನೆ, ವಿವರಣೆ, ಸಲಹೆ, ನಿದರ್ಶನ ಮುಂತಾದ ವಿಧಾನಗಳಿಂದ ಅನುಬೋಧಾನಿಧಿಯನ್ನು ಪ್ರಚೋದಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಆ ವಿಷಯಕ್ಕೆ ಸಂಬಂಧಿಸಿದ ಯಾವ ಯಾವ ಅಂಶ ಎಷ್ಟೆಷ್ಟು ಪರಿಚಯವಿದೆ ಎಂಬುದನ್ನು ಅಧ್ಯಾಪಕರು ಅರಿತುಕೊಳ್ಳುವರು. ಈ ಪೂರ್ವಸಿದ್ಧತೆ ಆದೊಡನೆ ಹೊಸಪಾಠದ ಗುರಿಯನ್ನು ಸ್ಪಷ್ಟವಾಗಿ ವಿದ್ಯಾರ್ಥಿಗಳ ಮುಂದಿಡಲಾಗುವುದು.

	2 ನಿರೂಪಣೆ (ವಿಷಯ ಪ್ರದರ್ಶನ): ಬೋಧಿಸಬೇಕಾದ ವಿಷಯವನ್ನು ಕ್ರಮಕ್ರಮವಾಗಿ ಪ್ರಶ್ನೆ, ವಿವರಣೆ, ನಿದರ್ಶನ, ಸಲಹೆ, ಚಿತ್ರ, ಉಪಕರಣ ಮುಂತಾದ ಸಾಧನಗಳ ಮೂಲಕ ವಿದ್ಯಾರ್ಥಿಗಳು ಅರಿತುಕೊಳ್ಳುವಂತೆ ಮಾಡುವುದು ಈ ಅಂತಸ್ತಿನಲ್ಲಿ ನಡೆಯುತ್ತದೆ.

	3 ಹೋಲಿಕೆ (ಸಂಬಂಧಕಲ್ಪನೆ): ಎರಡನೆಯ ಅಂತಸ್ತಿನಲ್ಲಿ ಪರಿಚಯ ಮಾಡಿಕೊಟ್ಟ ವಿವಿಧ ಅಂಶಗಳು ತಮ್ಮತಮ್ಮೊಳಗೆ ಹೊಂದಿರುವ ಸಂಬಂಧವನ್ನು ದರ್ಶಿಸಿ ಪರಿಚಯವಾದ ವಿಶಾಲ ವಿಷಯ ಕ್ಷೇತ್ರವನ್ನು ಸಂಗ್ರಹಿಸಿಕೊಳ್ಳುವಂತೆ ಮಾಡುವುದು ಈ ಹಂತದಲ್ಲಿ ನಡೆಯುತ್ತದೆ.

	4 ಸಾರ್ವತ್ರೀಕರಣ (ನಿಯಮ ನಿರೂಪಣೆ) : ಮೂರನೆಯ ಅಂತಸ್ತಿನಲ್ಲಿ ಸಾಧಿಸಿದ ಸಂಬಂಧಕಲ್ಪನೆಯ ಆಧಾರದ ಮೇಲೆ ಅವೆಲ್ಲಕ್ಕೂ ಆಧಾರವಾಗಿರುವ ಸಾರ್ವತ್ರಿಕ ನಿಯಮವನ್ನು ಪ್ರಶ್ನೆ, ಸಲಹೆ, ನಿರೂಪಣೆಗಳ ಮೂಲಕ ವಿದ್ಯಾರ್ಥಿಗಳು ದರ್ಶಿಸುವಂತೆ ಮಾಡುವುದು ಈ ಹಂತದಲ್ಲಿ ನಡೆಯುತ್ತದೆ. ಇದು ಸಾಹಿತ್ಯ ಕಲೆ ಮುಂತಾದ ಪಾಠಗಳಲ್ಲಿ ಅನಗತ್ಯ.

	5 ಅನ್ವಯ (ಪ್ರಯುಕ್ತಿ): ನಾಲ್ಕನೆಯ ಅಂತಸ್ತಿನಲ್ಲಿ ರೂಢಿಸಿದ ನಿಯಮವನ್ನು ಪ್ರಯೋಗಿಸಿ ನೋಡಿ ಅದರ ಯಥಾರ್ಥತೆಯನ್ನು ಸ್ಪಷ್ಟಪಡಿಸಿಕೊಳ್ಳುವ ಕಾರ್ಯ ಇಲ್ಲಿ ನಡೆಯುತ್ತದೆ. ನಾಲ್ಕನೆಯ ಅಂತಸ್ತು ಎಲ್ಲಿ ಅನಗತ್ಯವಾಗುವುದೋ ಆ ವಿಷಯಗಳ ಪಾಠಬೋಧನೆಯಲ್ಲಿ 1, 2, 3 ನೆಯ ಅಂತಸ್ತುಗಳಲ್ಲಿ ಸಾಧಿಸಿದ ಜ್ಞಾನವನ್ನು ಪ್ರಯೋಗಿಸಿ ಪ್ರಬಂಧರಚನೆ, ಪ್ರಶ್ನೆಗಳನ್ನು ಉತ್ತರಿಸುವುದು, ಮಾದರಿ ರಚನೆ, ಚಿತ್ರಲೇಖನ, ಅಧಿಕವಾಚನ ಮುಂತಾದ ಮನೆಗೆಲಸಗಳ ಸ್ವರೂಪವನ್ನು ತಾಳುತ್ತದೆ.

	ಮೇಲೆ ವಿವರಿಸಿದ ಮೊದಲ ನಾಲ್ಕು ಸೋಪಾನಗಳಲ್ಲಿ ಜ್ಞಾನಾರ್ಜನೆ ಅಥವಾ ಅನುಭವ ಸಾಧನೆ ಅನುಗಮನ ವಿಧಾನದಲ್ಲಿ ನಡೆಯುತ್ತದೆ. ಆದರೆ ಅದು ಪೂರ್ಣವಾದಂತಾಗದು. ಅದಕ್ಕಾಗಿಯೇ ಅದನ್ನು ಪ್ರಯೋಗಿಸಿ ನೋಡುವ ಕೊನೆಯ ಹಂತವನ್ನು ಸೇರಿಸಲಾಗಿದೆ. ಆ ಮೂಲಕ ಜ್ಞಾನ ಅಥವಾ ಅನುಭವ ಪೂರ್ಣತ್ವವನ್ನು ಸಾಧಿಸುತ್ತದೆ. ವ್ಯಕ್ತಿತ್ವದ ಬೆಳೆವಣಿಗೆ ಮತ್ತು ಶೀಲನಿರೂಪಣೆಗೆ ಹರ್ಬಾಟ್ ಸಿದ್ಧಾಂತದ ಪ್ರಕಾರ ಈ ಪೂರ್ಣತ್ವ ಅಗತ್ಯ. 

	ಪಂಚಸೋಪಾನ ಬೋಧನಕ್ರಮದ ಯುಕ್ತತೆ : ಹರ್ಬಾರ್ಟ್‍ನ ಪಂಚ ಸೋಪಾನದ ಬೋಧನಕ್ರಮ ಕಳೆದ ಶತಮಾನದಲ್ಲಿ ಜರ್ಮನಿಯಲ್ಲೂ ಅನಂತರ ಯೂರೋಪಿನ ಇತರ ದೇಶಗಳಲ್ಲೂ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲೂ ತುಂಬ ಜನಪ್ರಿಯತೆ ಪಡೆಯುತ್ತ ಬಂತು. ಈ ಶತಮಾನದ ಆದಿಯಿಂದ ಭಾರತದಲ್ಲೂ ಇತರ ಪೌರಸ್ತ್ಯ ದೇಶಗಳಲ್ಲೂ ಪ್ರಚಾರಕ್ಕೆ ಬಂತು. ಮೊದಲು ಪ್ರೌಢಶಾಲೆಯಲ್ಲೂ ಅನಂತರ ಪ್ರಾಥಮಿಕ ಶಾಲೆಯಲ್ಲೂ ಬಳಕೆಗೆ ಬಂದು ಇತರ ಶಿಕ್ಷಣ ಸಂಸ್ಥೆಗಳಿಗೂ ಹರಡಿತು. ಅಧ್ಯಾಪಕ ಶಿಕ್ಷಣ ಕಾಲೇಜುಗಳಲ್ಲಿ ಬೋಧನೆಗೆ ಇದು ಏಕೈಕ ಮಾರ್ಗವೆನ್ನುವಷ್ಟರಮಟ್ಟಿನ ಜನಪ್ರಿಯತೆ ಪಡೆಯಿತು. ಆದರೆ ಕ್ರಮಕ್ರಮವಾಗಿ ಹರ್ಬಾರ್ಟ್‍ನ ಸೈದ್ಧಾಂತಿಕ ಅಂಶಗಳು ಟೀಕೆಗೆ ಒಳಗಾದಂತೆ ಅವನ ಬೋಧನಕ್ರಮಕ್ಕೆ ಸರಿದೂಗುವಂಥ ಇತರ ಬೋಧನ ಕ್ರಮಗಳು ಆಚರಣೆಗೆ ಬಂದಂತೆ ಶಿಕ್ಷಣ ಕ್ಷೇತ್ರದಲ್ಲಿ ಅದರ ಪ್ರಾಮುಖ್ಯ ಕಡಿಮೆಯಾಗುತ್ತ ಬಂತು.

	ಟೀಕೆಗಳು : ಹರ್ಬಾರ್ಟ್‍ನ ಪಂಚಸೋಪಾನದ ಪಾಠಕ್ರಮ ಬಹುಮಟ್ಟಿಗೆ ಬೋಧನೆಗೆ ಅನುಕೂಲಿಸುವಂತಿದೆಯಾದರೂ ಕಲಿವಿಗೆ ಅನುಕೂಲಕರವಲ್ಲ; ಪಾಠಕಾಲದಲ್ಲಿ ಅಧ್ಯಾಪಕರು ಮೊದಲಿಂದ ಕೊನೆಯವರೆಗೆ ಚಟುವಟಿಕೆಯಿಂದಿರುತ್ತಾರೆ. ವಿದ್ಯಾರ್ಥಿಗಳೆಲ್ಲ ಆಗ ನಿಷ್ಕ್ರಿಯರಾಗಿರುತ್ತಾರೆ. ಅಧ್ಯಾಪಕರಿಗೇ ಪ್ರಾಧಾನ್ಯವಿರುವ ಈ ಕ್ರಮ ಅವರ ಸರ್ವಾಧಿಕಾರಕ್ಕೆ ಎಡೆಗೊಟ್ಟು ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ್ಯವನ್ನೂ ಸ್ವಯಂಕಲಿವನ್ನೂ ಪ್ರಚೋದಿಸಲು ವಿಫಲವಾಗಿರುತ್ತದೆ; ವಿದ್ಯಾರ್ಥಿಗಳು ಪಾಠದಲ್ಲಿ ಭಾಗಿಯಾಗಲು ಅಷ್ಟಾಗಿ ಅವಕಾಶ ಕಲ್ಪಿಸುವಂತಿಲ್ಲ; ಕೇವಲ ಮಾತಿಗೇ ಪ್ರಾಧಾನ್ಯವುಳ್ಳ ಈ ಕ್ರಮ ವಿದ್ಯಾರ್ಥಿ ಚಟುವಟಿಕೆ ಮತ್ತು ಕಾರ್ಯಾನುಭವಗಳಿಗೆ ಅವಕಾಶವೀಯುವುದಿಲ್ಲವಾದ್ದರಿಂದ ಕಲಿವು ಅಷ್ಟಾಗಿ ಪರಿಣಾಮಕಾರಿಯಾಗದು; ಈ ಕ್ರಮದ ಐದು ಹಂತಗಳು ಸಾಹಿತ್ಯ, ಇತಿಹಾಸ, ಚಿತ್ರಕಲೆ, ಸಂಗೀತ ಮುಂತಾದ ಪಾಠಗಳಿಗೆ ಅಷ್ಟಾಗಿ ಹೊಂದುವುದಿಲ್ಲ; ಈ ಕ್ರಮದಲ್ಲಿ ಅಳವಡಿಸಿರುವ ಐದು ಹಂತಗಳನ್ನೇ ಗಮನದಲ್ಲಿರಿಸಿಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳೆವಣಿಗೆಯ ಕಡೆಗೆ ಅಷ್ಟಾಗಿ ಗಮನವೀಯದೆ ಯಾಂತ್ರಿಕವಾಗಿ ಪಾಠ ಸಾಗಿಸಬಹುದು-ಇವೇ ಮುಂತಾದ ಟೀಕೆಗಳು ಈ ಶತಮಾನದ ಆದಿಯಲ್ಲಿ ಬರಹತ್ತಿದುವು. ಜೊತೆಗೆ ಡಾಲ್ಟನ್ ಪದ್ಧತಿ, ವಿನೆಟ್ಕ ಪದ್ಧತಿ, ಉದ್ಯಮ ಪದ್ಧತಿ, ಮಾರಿಸನ್ ಯೋಜನೆ ಮುಂತಾದ ನೂತನ ಬೋಧನಕ್ರಮಗಳು ಪ್ರಚಾರಕ್ಕೆ ಬಂದುವು.

	ಈ ಬೋಧನಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಚಟುವಟಿಕೆಯಿಂದಿರಲು ಅವಕಾಶ ಇದ್ದೇ ಇದೆ. ಪ್ರಶ್ನೆಗಳಿಗೆ ಉತ್ತರ ಹುಡುಕುವುದು, ಮುಖ್ಯಾಂಶ, ಚಿತ್ರ, ಉದ್ಧøತಭಾಗ ಮುಂತಾದವನ್ನು ಬರೆದುಕೊಳ್ಳುವುದು, ತಿಳಿಯದ ಅಥವಾ ಅನುಮಾನವೆನಿಸುವ ಅಂಶಗಳನ್ನು ಕೇಳಿ ತಿಳಿದುಕೊಳ್ಳುವುದು ಮುಂತಾದುದಕ್ಕೆ ಅವಕಾಶ ಇದ್ದೇ ಇದೆ. ತರಗತಿಯಲ್ಲಿ ನಿಜವಾಗಿ ಹಿರಿಯರೂ ಪ್ರಾಜ್ಞರೂ ಅನುಭವಿಗಳೂ ಆದವರು ಅಧ್ಯಾಪಕರೊಬ್ಬರೇ; ಅವರಿಗೆ ಪ್ರಾಧಾನ್ಯ ಇರಬೇಕಾದ್ದು ಸ್ವಾಭಾವಿಕ ಕಿರಿಯರನ್ನು ಸೂಕ್ತಮಾರ್ಗದಲ್ಲಿ ಕರೆದೊಯ್ಯಬೇಕಾದರೆ ಅವರಿಗೆ ಆ ಪ್ರಾಧಾನ್ಯ ಅಗತ್ಯ. ಆದರೆ ಮಕ್ಕಳ ಮೇಲೆ ಅವರು ಎಂದಿಗೂ ಅಧಿಪತ್ಯ ನಡೆಸಬಾರದು.

	ಮಕ್ಕಳ ಮನಸ್ಸು ವಿಷಯವನ್ನು ಗ್ರಹಿಸುವ ರೀತಿಯನ್ನು ಅನುಭವದಿಂದ ಕಂಡುಕೊಂಡಿದ್ದ ಹರ್ಬಾರ್ಟ್ ತನ್ನ ಅನುಭವವನ್ನೇ ಆಧಾರಮಾಡಿಕೊಂಡು ರೂಪಿಸಿರುವ ಈ ಕ್ರಮ ಆಧುನಿಕ ಮನಶ್ಯಾಸ್ತ್ರ ಸಮ್ಮತವಲ್ಲವೆಂದು ಕೆಲವರು ವಾದಿಸಿದರೂ ಕಾರ್ಯಕ್ಷೇತ್ರದಲ್ಲಿ ಇದು ಫಲದಾಯಕವಾಗಿ ಕಂಡುಬರುವುದರಿಂದ ಮಕ್ಕಳು ಕಲಿಯುವ ರೀತಿಯನ್ನು ಅನುಸರಿಸಿಯೇ ಈ ಕ್ರಮ ರೂಪುಗೊಂಡಿದೆಯೆಂದು ಹೇಳಬಹುದು. ಹರ್ಬಾರ್ಟ್ ಇದನ್ನು ಕೆಲವು ಪಾಠಗಳ (ವ್ಯಾಕರಣ, ವಿಜ್ಞಾನ, ಗಣಿತ ಮುಂತಾದವು) ಬೋಧನೆಗೆಂದು ರೂಪಿಸಿದ್ದರೂ ಅವನ ಅನುಯಾಯಿಗಳು ಅದನ್ನು ಎಲ್ಲ ವಿಷಯಗಳ ಪಾಠಗಳಿಗೆ ಅಳವಡಿಸಲು ಯತ್ನಿಸಿ ಒಂದಿಷ್ಟು ಕೃತಕತೆಯನ್ನು ತಂದೊಡ್ಡಿರುವರು. ಆದರೆ ಕೆಲವು ಪಾಠಗಳಿಗೆ ಈ ಎಲ್ಲ ಹಂತಗಳೂ ಅಗತ್ಯವಿರುವುದಿಲ್ಲ. ಆದ್ದರಿಂದ ಯುಕ್ತರೀತಿಯಲ್ಲಿ ಬಳಸಿಕೊಂಡರೆ ಆ ಪಾಠಗಳಿಗೂ ಇದು ಉಚಿತವಾಗುತ್ತದೆ. ಕೆಲವರು ಯಾಂತ್ರಿಕವಾಗಿ ಅದರ ಅಂತಸ್ತುಗಳನ್ನು ಹಾದುಹೋಗುತ್ತ ನಿಜವಾದ ಬೋಧನೆಯ ಗುರಿಯನ್ನು ನಿರ್ಲಕ್ಷಿಸಬಹುದು. ಆದರೆ ಇದು ಅಧ್ಯಾಪಕರ ತಪ್ಪೇ ಹೊರತು ಬೋಧನಕ್ರಮದ್ದಲ್ಲ. ಹೊಸಬರೂ ಅಭ್ಯಾಸಾರ್ಥ ಪಾಠ ಮಾಡತಕ್ಕವರೂ ಈ ಕ್ರಮವನ್ನು ಅನುಸರಿಸುವುದರಿಂದ ಅತ್ತ ಇತ್ತ ಅಡ್ಡಾಡದೆ, ಹಿಂದಕ್ಕೆ ಮುಂದಕ್ಕೆ ಅಲೆದಾಡದೆ ಹೇಳಿದ್ದನ್ನೇ ಹೇಳದೆ ಉದ್ದೇಶಿತ ಯೋಜನೆಯಂತೆ ಪಾಠ ಬೋಧಿಸಬಹುದು. ಈ ಕ್ರಮವನ್ನು ಅನುಸರಿಸುವುದರಿಂದ ಅದನ್ನು ಅನುಸರಿಸದೆ ಇರುವುದರಿಂದ ಉಂಟಾಗಬಹುದಾದ ದೋಷಗಳಿಗೆ ಇಲ್ಲಿ ಅವಕಾಶವಿಲ್ಲ. ಕುಶಲರಾದ ಅಧ್ಯಾಪಕರು ಈ ಕ್ರಮವನ್ನು ಯಶಸ್ವಿಯಾಗಿ ಬಳಸಿಕೊಳ್ಳಬಲ್ಲರು. ಆದ್ದರಿಂದ ಎಷ್ಟೇ ನೂತನ ಕ್ರಮಗಳು ಬಂದಿದ್ದರೂ ಈ ಕ್ರಮ ಇನ್ನೂ ಜನಪ್ರಿಯವಾಗಿಯೇ ಪ್ರಚಾರದಲ್ಲಿದೆ.									(ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ